ಅ.1ರಂದು ಚಂಡಮಾರುತ ಅಣಕು ಕಾರ್ಯಾಚರಣೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಅ.1ರಂದು ಆಯೋಜಿಸಿರುವ ಅಂತರರಾಜ್ಯ ಚಂಡಮಾರುತ ಅಣಕು ಕಾರ್ಯಾಚರಣೆ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಣಕು ಕಾರ್ಯಾಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಂಭವಿಸಬಹುದಾದ ಚಂಡಮಾರುತದಂತಹ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ಈ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಂದಾಯ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ, ಎನ್‌ಡಿಆರ್‌ಎಫ್, ಬಂದರು, ಸ್ಥಳೀಯ ಸಂಸ್ಥೆಗಳು, ನೌಕಾ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖೆಗಳು ಭಾಗವಹಿಸಲಿವೆ.
ಚಂಡಮಾರುತದ ಸಂದರ್ಭದಲ್ಲಿ ಉಂಟಾಗಬಹುದಾದ ಬೃಹತ್ ಮಳೆ, ಬಿರುಗಾಳಿ, ಸಮುದ್ರದ ಅಬ್ಬರ, ಕಡಲ್ಕೊರೆತ, ಪ್ರವಾಹ, ಮರಗಳ ಉರುಳುವಿಕೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿ ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳನ್ನು ಅಣಕು ಕಾರ್ಯಾಚರಣೆಯಲ್ಲಿ ಸೃಷ್ಟಿಸಿ, ಅವುಗಳನ್ನು ನಿಭಾಯಿಸುವ ಇಲಾಖೆಗಳ ಸಿದ್ಧತೆಯನ್ನು ಪರಿಶೀಲಿಸಲಾಗುತ್ತದೆ.
ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಗುರುತಿಸಿರುವ Sites ಗಳಲ್ಲಿ ಕೃತಕ ವಿಪತ್ತು ಪರಿಸ್ಥಿತಿಗಳನ್ನು ನಿರ್ಮಿಸಿ ಕಾರ್ಯಾಚರಣೆ ನಡೆಸಲಾಗುವುದು. ಕಾರವಾರದ ಬೈತಖೋಲ್ ಹಾಗೂ ಕದ್ರಾ ಪ್ರದೇಶ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಯಲಿದ್ದು, ಕೆಎಸ್‌ಆರ್‌ಟಿಸಿ ಬಸ್, ಹೊನ್ನಾವರದ ಕಾಸರಕೋಡ್‌ನ ಮೀನುಗಾರಿಕಾ ಪ್ರದೇಶ, ಭಟ್ಕಳದ ಮುರುಡೇಶ್ವರ ಬೀಚ್ ಹಾಗೂ ಕುಮಟಾ ತಾಲ್ಲೂಕಿನ ತದಡಿ ಮೀನುಗಾರಿಕಾ ಬಂದರು ಸೇರಿದಂತೆ ಪ್ರಮುಖ ಸ್ಥಳಗಳನ್ನು ಪರಿಗಣಿಸಲಾಗಿದೆ.
ಅಣಕು ಕಾರ್ಯಾಚರಣೆಯಲ್ಲಿ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ Incident Commander ಅವರನ್ನು ನಿಯೋಜಿಸಿ, ಸ್ಥಳೀಯ ಮಟ್ಟದಲ್ಲಿ ವಿವಿಧ ಇಲಾಖೆಗಳ ಕಾರ್ಯಾಚರಣೆಯನ್ನು ಸಮನ್ವಯಗೊಳಿಸಲಾಗುತ್ತದೆ. ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (DEOC) ಮೂಲಕ ಮಾಹಿತಿ ಸಂಗ್ರಹಣೆ, ರವಾನೆ ಹಾಗೂ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲಾಗುತ್ತದೆ.
ಅಣಕು ಕಾರ್ಯಾಚರಣೆಯ ಮೂಲಕ ಜಿಲ್ಲೆಯಲ್ಲಿ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ವಿವಿಧ ಇಲಾಖೆಗಳು ತ್ವರಿತವಾಗಿ ಸ್ಪಂದಿಸುವ ಸಾಮರ್ಥ್ಯ, ಪರಸ್ಪರ ಸಮನ್ವಯ, ತುರ್ತು ಸೇವೆಗಳ ಲಭ್ಯತೆ ಹಾಗೂ ರಕ್ಷಣಾ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲಾಗುತ್ತದೆ. ಈ ವೇಳೆ ಸಾರ್ವಜನಿಕರಿಗೆ ಯಾವುದೇ ಆತಂಕ ಉಂಟಾಗದಂತೆ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಅಣಕು ಕಾರ್ಯಾಚರಣೆಯನ್ನು ನೈಜ ವಿಪತ್ತು ಎಂದು ಭಾವಿಸಿ ಆತಂಕಕ್ಕೊಳಗಾಗದೆ, ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.