ಉಪ ಲೋಕಾಯುಕ್ತರಿಂದ ಸಾರ್ವಜನಿಕರ ದೂರುಗಳ ವಿಚಾರಣೆ
ಕಾರವಾರ : ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವಿರುದ್ಧ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ದೂರುಗಳು, ಬಾಕಿ ಇರುವ ಪ್ರಕರಣಗಳ ಕುರಿತು ಲೋಕಾಯುಕ್ತದ ಗೌರವಾನ್ವಿತ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ದೂರುಗಳ ವಿಚಾರಣೆ ಹಾಗೂ ಪ್ರಕರಣಗಳನ್ನು ಕಾನೂನಾತ್ಮಕವಾಗಿ ವಿಲೇವಾರಿ ಮಾಡಿದರು.
ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳು, ದೂರುದಾರರು ಹಾಗೂ ಎದುರುದಾರರ ಸಭೆಯಲ್ಲಿ ಒಟ್ಟು 80 ಪ್ರಕರಣಗಳನ್ನು ವಿಚಾರಣೆ ನಡೆಸಿದರು.
ದೂರುದಾರರು ತಮ್ಮ ಅಹವಾಲುಗಳನ್ನು ನೇರವಾಗಿ ಮಂಡಿಸಲು ಹಾಗೂ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದ ಅವರು,
ಎದುರುದಾರರಿಗೂ ತಮ್ಮ ನಿಲುವು ಹಾಗೂ ದಾಖಲೆಗಳನ್ನು ಮಂಡಿಸಲು ಸಮಾನ ಅವಕಾಶ ನೀಡಿದರು.
ಸಾರ್ವಜನಿಕರು ಸಲ್ಲಿಸಿರುವ ದೂರುಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ಅರ್ಹ ಪ್ರಕರಣಗಳಲ್ಲಿ ತ್ವರಿತವಾಗಿ ಕ್ರಮ ಕೈಗೊಂಡ ಅವರು, ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಕರಣಗಳ ಸ್ಥಿತಿಗತಿ, ಕೈಗೊಂಡಿರುವ ಕ್ರಮ ಹಾಗೂ ಬಾಕಿ ಉಳಿದಿರುವುದಕ್ಕೆ ಕಾರಣಗಳ ಕುರಿತು ವಿವರ ಗಳನ್ನು ಪಡೆದರು.
ದೂರುಗಳನ್ನು ಸಲ್ಲಿಸಿ ವಿಚಾರಣೆಗೆ ಗೈರು ಹಾಜರಾಗಿದ್ದ ದೂರುದಾರರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಅವರ ದೂರುಗಳಿಗೆ ನ್ಯಾಯ ಒದಗಿಸುವುದರ ಜೊತೆಗೆ ಅರ್ಜಿಗಳನ್ನು ವಿಲೇವಾರಿ ಮಾಡಿ ಸೌಲಭ್ಯ ಒದಗಿಸಿರುವ ಬಗ್ಗೆ ಅಧಿಕಾರಿಗಳು ನೀಡಿದ ಮಾಹಿತಿ ಬಗ್ಗೆ ಫಲಾನುಭವಿಗಳನ್ನು ಸಂಪರ್ಕಿಸಿ ಖಚಿತ ಪಡಿಸಿ ಕೊಂಡಿದ್ದು ವಿಶೇಷವಾಗಿತ್ತು.
ಲೋಕಾಯುಕ್ತ ವ್ಯಾಪ್ತಿ ಮೀರಿದ ಪ್ರಕರಣಗಳ ಕುರಿತಂತೆ ನ್ಯಾಯಾಲಯಗಳ ಮೂಲಕ ನ್ಯಾಯ ಪಡೆಯುವ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಿದ ಅವರು, ಆರ್ಥಿಕ ದುರ್ಬಲರಾಗಿದ್ದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ನೆರವು ಪಡೆಯುವಂತೆಯು ಸಲಹೆ ನೀಡಿದರು.
ಗೋಕರ್ಣ ರೈಲ್ವೆ ಸ್ಟೇಷನ್ ನಲ್ಲಿ ಅನಧಿಕೃತ ಬೈಕ್ ರೆಂಟ್ ನಡೆಯುತ್ತಿದ್ದ ದೂರಿನ ಬಗ್ಗೆ ಈಗಾಗಲೇ ಕ್ರಮ ಕೈಗೊoಡಿದ್ದು, ಬಾಡಿಗೆ ಬೈಕ್ ಪಡೆಯಲು ಯಾವುದೇ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೇ ಬೈಕ್ ರೆಂಟ್ ನಡೆಯುತ್ತಿದ್ದರೆ ಪೊಲೀಸ್ ಗೆ ದೂರು ನೀಡುವಂತೆ ದೂರುದಾರರಿಗೆ ತಿಳಿಸಿದರು.
ಕುಮಟಾ ತಾಲೂಕು ಹಳಕಾರ ಗ್ರಾಮದ ಗುನಗನಕೊಪ್ಪದಲ್ಲಿ 5 ಮನೆಗಳಿಗೆ ನೀರಿನ ಪೂರೈಕೆ
ಆಗುತ್ತಿಲ್ಲ ಎಂಬ ದೂರಿನ ಬಗ್ಗೆ 15 ದಿನಗಳ ಕಾಲಾವಕಾಶ ನೀಡಿ ದೂರುದಾರರ ಸಮಸ್ಯೆ ಪರಿಹರಿಸುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯತ ಪಿ. ಡಿ. ಓ ಗೆ ಸೂಚನೆ ನೀಡಿದರು.
ವೇತನ ಬಾಕಿ ಮೊತ್ತ ಪಡೆಯಲು
ನಾಲ್ಕು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದ್ದ ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿಗೆ ಸಂಬಂಧಪಟ್ಟ ಎಲ್ಲಾ ವೇತನ ಬಾಕಿಯ ಕುರಿತು ದಾಖಲೆ ಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ನೀಡುವಂತೆ ಡಿ. ಹೆಚ್. ಓ ಗೆ ನಿರ್ದೇಶನ ನೀಡಿದರು.
ಯಲ್ಲಾಪುರ ಬಸ್ ನಿಲ್ದಾಣ ಮತ್ತು ಮುಂಡಗೋಡ ಬಸ್ ನಿಲ್ದಾಣದ ಕುರಿತ ದೂರುಗಳನ್ನು ಈಗಾಗಲೇ ಇತ್ಯರ್ಥ ಪಡಿಸಿರುವುದಾಗಿ ತಿಳಿಸಿದ ಅಧಿಕಾರಿಗಳ ಮಾಹಿತಿ ಕುರಿತು ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಲೋಕಾಯುಕ್ತ
ಡಿವೈಎಸ್ಪಿ ಗೆ ತಿಳಿಸಿದರು.
ಮುರ್ಡೇಶ್ವರದ ಹೋಟೆಲ್ ಒಂದರ ಜಂಟಿ ಖಾತೆಯ ಪರವಾನಗಿ ನವೀಕರಣ, ತೆರಿಗೆ ಪಾವತಿ ಸಂಬಂಧಿಸಿದ ದೂರಿಗೆ ಸಂಬಂಧಿಸಿದಂತೆ ಜಂಟಿ ಖಾತೆಯಲ್ಲಿದ್ದ ಪರವಾನಿಗೆಯನ್ನು ಒಬ್ಬರ ಹೆಸರಿನಲ್ಲಿ ಪರವಾನಿಗೆ ನವೀಕರಣ ಮತ್ತು ತೆರಿಗೆ ಪಾವತಿಯಲ್ಲಿ ಜಂಟಿ ಹೆಸರು ಬದಲು ಒಬ್ಬರ ಹೆಸರಲ್ಲಿ ಮಾತ್ರ ಪಾವತಿಸಿಕೊಳ್ಳುವ ಕುರಿತು ಲೋಕಾಯುಕ್ತ ಪೊಲೀಸ್ ರಿಂದ ಸಮಗ್ರ ತನಿಖೆ ನಡೆಸುವಂತೆ ನಿರ್ದೇಶನ ನೀಡಿದರು.
ಸಾರ್ವಜನಿಕರು ನೀಡಿರುವ ಮನವಿಗೆ ಅಧಿಕಾರಿಗಳು ದಾಖಲೆಗಳನ್ನು ನೀಡುವಲ್ಲಿ ವಿನಾಕರಣ ವಿಳಂಬ ಮಾಡಬಾರದು. ಒಂದುವೇಳೆ ವಿಳಂಬನೀತಿ ದೋರಣೆ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿ ವಿಲೇವಾರಿ ಮಾಡಬೇಕು ಇಲ್ಲವಾದರೆ ಸಂಬಂಧಪಟ್ಟ ಇಲಾಖೆಯ ಬಗ್ಗೆ ಇರುವ ಗೌರವ ಕಡಿಮೆಯಾಗಲಿದೆ ಎಂದರು.
ವಿಚಾರಣೆಯಲ್ಲಿ ಕುಮಟಾ ತಾಲ್ಲೂಕಿನ 10, ಮುಂಡಗೋಡ 4, ಶಿರಸಿ, ಯಲ್ಲಾಪುರ 7, ಹಳಿಯಾಳ 3, ದಾಂಡೇಲಿ 2, ಭಟ್ಕಳ 11, ಹೊನ್ನಾವರ 5, ಅಂಕೋಲಾ 6
ಕಾರವಾರ ತಾಲ್ಲೂಕಿನ 27 ದೂರುಗಳನ್ನು ವಿಚಾರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ದೂರುದಾರರು ಉಪಸ್ಥಿತರಿದ್ದರು.